ಮಾಲೀನಾಫ್‍ಸ್ಕೀ, ಬ್ರಾನೀಸ್ಲಾ ಕಾಸ್ಪರ್
1884-1942. ಸಮಾಜ ವಿಜ್ಞಾನಿ. ಪೋಲೆಂಡಿನ ಕ್ರಾಕೋ ನಗರದಲ್ಲಿ 1884 ಏಪ್ರಿಲ್ 7ರಂದು ಜನಿಸಿದ. ತಂದೆ ಲೂಸಿಯನ್, ಜಾಗಿಲ್ಲೋನಿಯನ್ ವಿಶ್ವವಿದ್ಯಾಲಯದಲ್ಲಿ ಸ್ಲಾವಿಕ್ ಭಾಷಾಶಾಸ್ತ್ರದ ಪ್ರಾಧ್ಯಾಪಕನಾಗಿದ್ದ. ಪೊಲಿಷ್ ಭಾಷೆ ಮತ್ತು ಜಾನಪದ ವಿಷಯಗಳಲ್ಲೂ ಪ್ರಭುತ್ವಗಳಿಸಿದ್ದ. ಸದಾ ಅನಾರೋಗ್ಯದಿಂದಿರುತ್ತಿದ್ದ ಮಾಲೀನಾಫ್‍ಸ್ಕೀಯ ಪ್ರಾಥಮಿಕ ಹಾಗೂ ಇನ್ನಿತರ ಶಿಕ್ಷಣಗಳು ಮನೆಯಲ್ಲೆ ನಡೆದುವು. ತರುವಾಯ ಶ್ರಮವಹಿಸಿ ಜಾಗಿಲ್ಲೋನಿಯನ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರ, ಭೌತ ಮತ್ತು ಗಣಿತ ವಿಜ್ಞಾನಗಳನ್ನು ಅಧ್ಯಯನ ಮಾಡಿ 1908ರಲ್ಲಿ ಪಿಎಚ್.ಡಿ. ಪದವಿ ಪಡೆದ. ಉದ್ಯೋಗ ಅರಸಿ ಲೀಪ್ಜಿಗ್ ಪ್ರಯೋಗಶಾಲೆ ಸೇರಿದರೂ ಅನಾರೋಗ್ಯದಿಂದಾಗಿ ಸಂಶೋಧನಾವೃತ್ತಿಗೆ ಶರಣು ಹೊಡೆದು ಓದಿನತ್ತ ಗಮನ ಹರಿಸಿದ. ಮೂರು ಸಂಪುಟಗಳಲ್ಲಿ ಪ್ರಕಟವಾಗಿದ್ದ ಫ್ರೇಜರನ ದಿ ಗೋಲ್ಡನ್ ಬೋ ಎಂಬ ಪುಸ್ತಕವನ್ನು ಓದಿ ಪ್ರಭಾವಿತನಾಗಿ ಮಾನವಶಾಸ್ತ್ರಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುವ ನಿರ್ಧಾರ ಕೈಗೊಂಡ. ಅನ್ವೇಷಣ ತಂಡವೊಂದರ ಕಾರ್ಯದರ್ಶಿಯಾಗಿ ಆಸ್ಟ್ರೇಲಿಯಕ್ಕೆ ತೆರಳಿದ. ಆಗ ಒಂದನೆಯ ಮಹಾಯುದ್ಧ ಪ್ರಾರಂಭವಾಗಿ ಆಸ್ಟ್ರೇಲಿಯ ಸರ್ಕಾರ ಪ್ರವೇಶ ನಿರ್ಬಂಧ ವಿಧಿಸಿದ್ದರಿಂದ ಈತ ಅದೇ ಸರ್ಕಾರದ ಮನವೊಲಿಸಿ ಧನಸಹಾಯ ಪಡೆದು ಮಯಿಲು ಮತ್ತು ಟ್ರೊಬ್ರಿಯಾಂಡ್ ದ್ವೀಪವಾಸಿಗಳ ಜೊತೆಯಲ್ಲಿದ್ದು ಆ ಸಂಸ್ಕøತಿಗಳ ಅಧ್ಯಯನ ಮಾಡಿದ (1915-18). ಇದು ಇವನ ಬದುಕು ಬರೆಹಗಳಿಗೆ ಮಹತ್ತ್ವದ ತಿರುವು ನೀಡಿತು. ಮುಂದೆ ಲಂಡನ್ ವಿಶ್ವವಿದ್ಯಾಲಯದಲ್ಲಿ ರೀಡರ್ (1924), ತರುವಾಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥನಾದ (1927). ಅಮೆರಿಕದ ಕ್ಯಾಲಿಫೋರ್ನಿಯ, ಕಾರ್ನೆಲ್ ಹಾಗೂ ಯೇಲ್ ವಿಶ್ವವಿದ್ಯಾಲಯಗಳಲ್ಲೂ ಸಂದರ್ಶಕ ಪ್ರಾಧ್ಯಾಪಕನಾಗಿದ್ದ. ಪ್ರಭಾವಶಾಲಿಯಾದ ವ್ಯಕ್ತಿತ್ವ, ನೇರಮಾತು, ಅನ್ಯಸಂಸ್ಕøತಿಗಳ ಆಂತರ್ಯವನ್ನು ಭೇದಿಸಬಲ್ಲ ತೀಕ್ಷ್ಣ ಚಿಕಿತ್ಸಕ ಬುದ್ಧಿ, ಸತತೋದ್ಯೋಗ, ಸಂಪ್ರದಾಯ ವಿರೋಧ ಈ ಗುಣಗಳಿಂದಾಗಿ ಅನೇಕ ಸಮಾಜ ವಿಜ್ಞಾನಿಗಳ ಗೌರವಕ್ಕೂ ಸಾಂಪ್ರದಾಯಿಕ ಮಾನವಶಾಸ್ತ್ರಜ್ಞರ ದೂಷಣೆಗೂ ಗುರಿಯಾಗಿ ವಾದವಿವಾದಗಳ ಕೇಂದ್ರಬಿಂದುವಾಗಿದ್ದ.

	ಈತ ಕ್ರಿಯಾತ್ಮಕವಾದ (ಫಂಕ್ಷನಲಿಸಮ್) ಎಂಬ ಪಂಥದ ಅಧ್ವರ್ಯುಗಳಲ್ಲಿ ಒಬ್ಬ. ಇವನ ಪ್ರಕಾರ ಸಾಮಾಜಿಕ ಪಳೆಯುಳಿಕೆಗಳನ್ನು ಆಧರಿಸಿ ಸಾಮಾಜಿಕ ಸಂಸ್ಥೆಗಳ ಮೂಲವನ್ನು ಶೋಧಿಸುವುದಕ್ಕಿಂತ ಅವುಗಳ ಸದ್ಯದ ಕಾರ್ಯೋದ್ದೇಶಗಳನ್ನು ಗುರುತಿಸುವುದು ಮೇಲು. ವಿಕಾಸವಾದ, ಪ್ರಸರಣವಾದ, ವಿನ್ಯಾಸವಾದ ಮುಂತಾದವು ಅನಾವಶ್ಯಕ. ನಮ್ಮ ಸಂಪ್ರದಾಯಗಳೂ ಭೌತಿಕ ಸಾಧನೆಗಳೂ ವಿಚಾರ ನಂಬುಗೆಗಳೂ ಒಂದಲ್ಲ ಒಂದು ಕಾರ್ಯೋದ್ದೇಶಕ್ಕಾಗಿ ಇವೆ. ಅವನ್ನು ಅರ್ಥವಿಸುವುದೇ ಮಾನವ ವಿಜ್ಞಾನಿಯ ಕರ್ತವ್ಯ. ಸಾಂಸ್ಕøತಿಕ ಅಭಿವ್ಯಕ್ತಿಯ ಹಿಂದೆ ಅಂದರೆ ಸಾಮಾಜಿಕ ಸಂಸ್ಥೆಗಳ ಆಂತರ್ಯದಲ್ಲಿ ನಮ್ಮ ಮೂಲಭೂತ ಅಗತ್ಯಗಳು ಅಥವಾ ಬೇಡಿಕೆಗಳು ಅಡಗಿವೆ. ಆಹಾರ, ಆಶ್ರಯ, ದೈಹಿಕ ಸೌಖ್ಯ, ಭದ್ರತೆ, ಚಲನೆ, ಬೆಳೆವಣಿಗೆ, ಸಂತಾನಕ್ರಿಯೆ ಇತ್ಯಾದಿಗಳು ಕುಟುಂಬ, ವಿವಾಹ, ಅರ್ಥವ್ಯವಸ್ಥೆ, ರಾಜ್ಯ, ಕಾಯಿದೆ ಕಾನೂನು, ವಿದ್ಯೆ ಹಾಗೂ ಇನ್ನಿತರ ಚಟುವಟಿಕೆಗಳನ್ನೂ ಸಂಸ್ಥೆಗಳನ್ನೂ ಸೃಷ್ಟಿಸಿದುವು. ಸಾಂಸ್ಕøತಿಕ ಅಗತ್ಯಗಳು ಮೂಲತಃ ದೈಹಿಕ ಅಗತ್ಯಗಳಿಂದ ನಿಷ್ಪನ್ನವಾಗಿವೆ. ಆದ್ದರಿಂದಲೇ ವಿಜ್ಞಾನ, ಮಂತ್ರವಿದ್ಯ, ಧರ್ಮ, ಕಲೆಗಳು ಜನ್ಮ ತಾಳಿವೆ.

	ಕುಟುಂಬ ಅನೇಕ ಕಾರಣಗಳಿಗಾಗಿ ಕೇಂದ್ರ ಸಂಸ್ಥೆ. ಧರ್ಮ ಸಂಯೋಜಕ ಶಕ್ತಿ. ಇದು ಅಜ್ಞಾನ ಆಕಸ್ಮಿಕಗಳಿಂದ ಹುಟ್ಟಿಲ್ಲ. ಮಂತ್ರವಿದ್ಯೆಯೂ ಹಾಗೆಯೇ. ಮೊದಲು ಮಂತ್ರವಿದ್ಯೆ; ಅನಂತರ ಧರ್ಮ; ಕೊನೆಗೆ ವಿಜ್ಞಾನ ಎಂಬ ವಾದಸರಣಿ ಒಪ್ಪಲಾಗದು. ಟ್ರೊಬ್ರಿಯಾಂಡ್ ವಾಸಿಗಳಲ್ಲಿ ಇರುವಂತೆ ಮಂತ್ರವಿದ್ಯೆ ಹಾಗೂ ವಿಜ್ಞಾನ ಏಕಕಾಲಕ್ಕೆ ಇರಬಹುದು. ಮಂತ್ರವಿದ್ಯೆಗೂ ಕಾರ್ಯೋದ್ದೇಶವೊಂದಿದೆ. ಅದು ಸಂಕಟ ನಿವಾರಕ. ಈ ಕಾರಣದಿಂದಲೇ ತೋಟ ಬೆಳೆಸುವ, ಹಡಗು ಕಟ್ಟುವ, ವೈಜ್ಞಾನಿಕ ಶಕ್ತಿಯುಳ್ಳ ಟ್ರೊಬ್ರಿಯಾಂಡ್ ವಾಸಿಗಳು ಮಂತ್ರವಿದ್ಯೆಯಲ್ಲೂ ನಂಬುಗೆಯುಳ್ಳವರಾಗಿದ್ದಾರೆ ಎಂಬುದು ಇವನ ಅಭಿಪ್ರಾಯ.

	ಇವನು ಹುಟ್ಟು ಹಾಕಿದ ಕ್ಷೇತ್ರಕಾರ್ಯ ಪರಂಪರೆಗೆ ಎರಡು ತಲೆಮಾರುಗಳ ಸಮಾಜ ವಿಜ್ಞಾನಿಗಳು ಗೌರವ ಸಲ್ಲಿಸಿದ್ದಾರೆ. ಕ್ಷೇತ್ರಕಾರ್ಯದ ಯಶಸ್ಸಿಗೆ ಜನರೊಡನೆ ವಾಸ, ಸಹಚರ್ಯೆ, ಭಾಷಾಜ್ಞಾನ, ಜನರ ಆಗುಹೋಗುಗಳ ಬಗ್ಗೆ ಆಸ್ಥೆ, ದಿನಬೆಳಗಿನ ಅತಿಕ್ಷುಲ್ಲಕವೆನಿಸುವ ಸಂಗತಿಗಳನ್ನೂ ವೀಕ್ಷಿಸುವ ಜಾಣ್ಮೆ ಇತ್ಯಾದಿ ಬೇಕೆಂದು ಪ್ರತಿಪಾದಿಸಿದ ಇವನಲ್ಲಿ ಈ ಗುಣಗಳೆಲ್ಲ ಇದ್ದುವು. ಇವನು ಪ್ರಚುರಗೊಳಿಸಿದ ಸಹಭಾಗಿ ವೀಕ್ಷಣೆ (ಪಾರ್ಟಿಸಿಪಂಟ್ ಅಬ್ಸರ್ವೇಶನ್) ವಿಧಾನ ಮಾನವಶಾಸ್ತ್ರದಲ್ಲಿ ಮಹತ್ತ್ವದ ವಿಧಾನವಾಗಿ ಬೆಳೆದಿದೆ.

	ಈತ ಪ್ರವರ್ತಿಸಿದ ಕ್ರಿಯಾತ್ಮಕವಾದ ಪರಿಪೂರ್ಣವಲ್ಲದಿದ್ದರೂ ಸತ್ಯಾಂಶವುಳ್ಳದ್ದು. ಸಂಸ್ಕøತಿ ಹಾಗೂ ಸಾಮಾಜಿಕ ಸಂಸ್ಥೆಗಳ ತಳಹದಿ ಹಾಗೂ ವ್ಯಕ್ತಿ, ಸಮಾಜ, ಸಂಸ್ಕøತಿಗಳ ಪರಸ್ಪರ ಸಂಬಂಧ ಇವು ಈತನ ಗಮನಾರ್ಹ ತತ್ತ್ವಗಳು. ಇವನು ಹಾಕಿಕೊಟ್ಟ ಕ್ಷೇತ್ರಕಾರ್ಯ ಪರಂಪರೆ ಮತ್ತು ಸಹಭಾಗಿ ವೀಕ್ಷಣೆ ಉಪಯುಕ್ತ ಕೊಡುಗೆಗಳು. 

ವಾದವಿವಾದಗಳನ್ನೆಬ್ಬಿಸಿದರೂ ಸಮಾಜವಿಜ್ಞಾನಿಗಳ ಹಾಗೂ ಸಾಮಾನ್ಯ ಜನರ ಲಕ್ಷ್ಯವನ್ನು ಮಾನವಶಾಸ್ತ್ರದತ್ತ ಸೆಳೆದ ಶ್ರೇಯಸ್ಸು ಈತನದು. ಮಾನವಶಾಸ್ತ್ರವನ್ನು ಆಧುನಿಕ ವಿಜ್ಞಾನಗಳ ಪಟ್ಟಕ್ಕೇರಿಸಿದವರ ಪೈಕಿ ಇವನೂ ಒಬ್ಬ. ಮಾನವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನಗಳನ್ನು ತನ್ನ ಕೃತಿಗಳಲ್ಲಿ ಬಳಸಿ ಇವುಗಳ ಅನ್ಯೋನ್ಯತೆಯನ್ನು ಸಾರಿದ. ಇವನನ್ನು ಪೀಟರ್ ಮುರ್ಡಕ್ ಎಂಬಾತ ಮಾನವ ವರ್ತನೆಯ ಅನ್ವೇಷಕ ಎಂದು ಕರೆದಿದ್ದಾನೆ.

	ಆರ್ಗೋನಾಟ್ಸ್ ಆಫ್ ದಿ ವೆಸ್ಟರ್ನ್ ಪೆಸಿಫಿಕ್ (1922); ಕ್ರೈಮ್ ಅಂಡ್ ಕಸ್ಟಮ್ ಇನ್ ಸ್ಯಾವೇಜ್ ಸೊಸೈಟಿ (1926); ಸೆಕ್ಸ್ ಅಂಡ್ ರಿಪ್ರೆಷನ್ ಇನ್ ಸ್ಯಾವೇಜ್ ಸೊಸೈಟಿ (1927); ಕೋರಲ್ ಗಾರ್ಡನ್ಸ್ ಅಂಡ್ ದೇರ್ ಮ್ಯಾಜಿಕ್ (2 ಸಂಪುಟಗಳು, 1935); ಎ ಸೈಂಟಿಫಿಕ್ ಥಿಯರಿ ಆಫ್ ಕಲ್ಚರ್ (1944); ಮ್ಯಾಜಿಕ್, ಸೈನ್ಸ್ ಅಂಡ್ ರಿಲಿಜನ್ ಅಂಡ್ ಅದರ್ ಎಸ್ಸೇಸ್ (1948)-ಇವು ಈತನ ಮುಖ್ಯ ಗ್ರಂಥಗಳು.

	ನ್ಯೂ ಹೆವನ್ ಎಂಬಲ್ಲಿ 1942 ಮೇ 16ರಂದು ಹೃದಯಾಘಾತದಿಂದ ಮರಣ ಹೊಂದಿದ.
  										(ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ